ಇಂದ್ರವರ್ಮನ್

ಭಾರತದ ಹಾಗೂ ಅದರ ಪ್ರಭಾವಕ್ಕೆ ಒಳಗಾದ ದೇಶಗಳ ಚರಿತ್ರೆಯಲ್ಲಿ ಈ ಹೆಸರಿನ ರಾಜರು ಅನೇಕರಿದ್ದಾರೆ. ಅವರಲ್ಲಿ ಮುಖ್ಯರಾದವರನ್ನು ಕುರಿತ ವಿವರಗಳನ್ನು ಮುಂದೆ ಕೊಟ್ಟಿದೆ.

ಇಂದ್ರವರ್ಮನ್ (ವಿಷ್ಣುಕುಂಡಿನ್ ಮನೆತನ): ಕ್ರಿ.ಶ. ಐದು-ಆರನೆಯ ಶತಮಾನಗಳಲ್ಲಿ ಆಂಧ್ರದೇಶದ ಕೆಲವು ಪ್ರದೇಶಗಳನ್ನಾಳುತ್ತಿದ್ದ ವಿಷ್ಣುಕುಂಡಿನ್ ಸಂತತಿಯ ಅರಸರಲ್ಲೊಬ್ಬ (480-515). ಒಂದನೆಯ ವಿಕ್ರಮೇಂದ್ರವರ್ಮನ ಅನಂತರ ಬಂದವ. ಈತನಿಗೆ ಇಂದ್ರಭಟ್ಟಾರಕ ಎಂಬ ಬಿರುದಿದ್ದಿತು. ಇಂದ್ರವರ್ಮನ್ ಪರಾಕ್ರಮಿ ಹಾಗೂ ವಿದ್ಯಾಪಕ್ಷಪಾತಿ. ಹೆಚ್ಚು ಹಣ ವ್ಯಯಮಾಡಿ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿದ. ಇಂದ್ರವರ್ಮನ ದಾಯಾದಿಯಾದ ಇಮ್ಮಡಿ ಮಾಧವವರ್ಮನ್ ತನಗೂ ರಾಜ್ಯದ ಹಕ್ಕಿದೆಯೆಂದು ಇಂದ್ರವರ್ಮನನ್ನು ಎದುರಿಸಿದ. ಕೊನೆಗೆ ಅವರಿಬ್ಬರಿಗೂ ರಾಜಿಯಾಯಿತು. ಇಂದ್ರವರ್ಮನ್ ಅವನಿಗೆ ಸ್ವಲ್ಪ ನೆಲ ಕೊಟ್ಟ. ಮಾಧವವರ್ಮನ್ ಮುಂದೆ ಇಂದ್ರವರ್ಮನ ಅಧೀನದಲ್ಲಿ ರಾಜ್ಯವಾಳುತ್ತಿದ್ದ. ಇಂದ್ರವರ್ಮನ ಆಳ್ವಿಕೆಯ ಕೊನೆಗಾಲದಲ್ಲಿ ಅವನಿಗೂ ಪೂರ್ವಗಂಗ ಮನೆತನದ ಒಂದನೆಯ ಇಂದ್ರವರ್ಮನಿಗೂ ಯುದ್ಧ ನಡೆದು ವಿಷ್ಣುಕುಂಡಿನ್ ಇಂದ್ರವರ್ಮನ್ ತನ್ನ ರಾಜ್ಯದ ಸ್ವಲ್ಪ ಭಾಗವನ್ನು ಕಳೆದುಕೊಂಡ. ಈತನ ತರುವಾಯ ಇಮ್ಮಡಿ ವಿಕ್ರಮೇಂದ್ರ ಪಟ್ಟಕ್ಕೆ ಬಂದ.

ಇಂದ್ರವರ್ಮನ್ 1 (ಪೂರ್ವ ಗಂಗ ಮನೆತನ): ಪೂರ್ವಗಂಗರೆಂದೂ ಕಳಿಂಗಗಂಗರೆಂದೂ ಕರೆಯಲಾಗಿರುವ ಮನೆತನದ ಸ್ಥಾಪಕ (496-535) ಗಂಜಾಂ ಜಿಲ್ಲೆಯಲ್ಲಿರುವ ಕಳಿಂಗ ನಗರ (ಇಂದಿನ ಮುಖಲಿಂಗಂ ಪಟ್ಟಣ) ಇವನ ರಾಜಧಾನಿ. ಈ ಇಂದ್ರವರ್ಮನನ್ನು ಶಾಸನಗಳಲ್ಲಿ ಕಳಿಂಗದ ಸ್ವಾಮಿ ಎಂದು ವರ್ಣಿಸಲಾಗಿದೆ. ಮಹಾರಾಜ ಇಂದ್ರವರ್ಮನ್ ತನ್ನದೇ ಆದ ಶಕೆಯನ್ನು ಜಾರಿಗೆ ತಂದ. ಈತನ ಸಂತತಿಯವರು ಅದೇ ಕಾಲಗಣನೆಯನ್ನು ಮುಂದುವರೆಸಿದರು. ಈತ ವಿಷ್ಣುಕುಂಡಿನ್ ಸಂತತಿಯ ಇಂದ್ರವರ್ಮನ್ ರಾಜನನ್ನು ಯುದ್ಧದಲ್ಲಿ ಸೋಲಿಸಿ ಅವನ ರಾಜ್ಯದ ಕೆಲವು ಭಾಗಗಳನ್ನು ವಶಪಡಿಸಿಕೊಂಡ. ಈತನ ಸಂತತಿಯವರು ಸುಮಾರು 400 ವರ್ಷಗಳ ಕಾಲ ರಾಜ್ಯವಾಳಿದರು.

ಇಂದ್ರವರ್ಮನ್ II : ಪೂರ್ವಗಂಗ ರಾಜಮನೆತನ ಸ್ಥಾಪಕನಾದ ಮೊದಲನೆಯ ಇಂದ್ರವರ್ಮನ ಮೊಮ್ಮಗ (583-587). ಈತನಿಗೆ ಪರಮ ಮಹೇಶ್ವರ ಮತ್ತು ಇಡೀಕಳಿಂಗದಸ್ವಾಮಿ ಎಂಬ ಬಿರುದುಗಳಿದ್ದುವು. 

ಇಂದ್ರವರ್ಮನ್ III : ಇಮ್ಮಡಿ ಇಂದ್ರವರ್ಮನ ಮಗ. ಕ್ರಿ.ಶ. 624ರಲ್ಲಿ ಪಟ್ಟಕ್ಕೆ ಬಂದನೆಂದು ತಿಳಿದುಬರುತ್ತದೆ. ಈತನ ದಾಯಾದಿಯಾದ ಧನಾರ್ಣವನಿಗೂ ಸಿಂಹಾಸನಕ್ಕಾಗಿ ಕದನಗಳು ನಡೆದವೆಂದು ಕೆಲವು ಶಾಸನಗಳಿಂದ ತಿಳಿದುಬರುತ್ತದೆ. 

ಇಂದ್ರವರ್ಮನ್ IV : ಈತ ಧನಾರ್ಣವನೆಂಬುವನ ಮಗ. ಮುಮ್ಮಡಿ ಇಂದ್ರವರ್ಮನನ್ನು ಓಡಿಸಿ ಕ್ರಿ.ಶ. 650ರಲ್ಲಿ ಸಿಂಹಾಸನ ಹತ್ತಿದ. ಈಶ್ವರಭಕ್ತನಾಗಿದ್ದನೆಂದು ವರ್ಣಿಸಲಾಗಿದೆ.

ಇಂದ್ರವರ್ಮನ್ (ಪೂರ್ವ ಚಾಲುಕ್ಯ): ಪೂರ್ವಚಾಲುಕ್ಯ ಸಂತತಿಯ ಒಂದನೆಯ ವಿಷ್ಣುವರ್ಧನನ ಮಗ (ಸು.663). ವಿಷ್ಣುವರ್ಧನನ ಮರಣಾನಂತರ ಈತನ ಹಿರಿಯ ಮಗನಾದ ಒಂದನೆಯ ಜಯಸಿಂಹ ರಾಜನಾದ. ಜಯಸಿಂಹನ ಆಳ್ವಿಕೆಯ ಕೊನೆಗಾಲದಲ್ಲಿ ಈತನ ತಮ್ಮನಾದ ಇಂದ್ರವರ್ಮನ್ ಆಡಳಿತ ಕಾರ್ಯವನ್ನು ನಿರ್ವಹಿಸುತ್ತಿದ್ದು, ಒಂದನೆಯ ಜಯಸಿಂಹನ ಮರಣಾನಂತರ ತಾನೇ ರಾಜನಾದ. ಈತ ಕೇವಲ ಒಂದು ವಾರ ಕಾಲ ರಾಜ್ಯವಾಳಿದನೆಂದು ತಿಳಿದುಬರುತ್ತದೆ. ಇವನಿಗೆ ಇಂದ್ರರಾಜ, ತ್ಯಾಗಧೇನು ಎಂಬ ಬಿರುದುಗಳೂ ಇದ್ದುವು. ಇಂದ್ರವರ್ಮನ ಅನಂತರ ಇಮ್ಮಡಿ ವಿಷ್ಣುವರ್ಧನ ರಾಜನಾದ. 

ಇಂದ್ರವರ್ಮನ್ I (ಚಂಪ) : ಕ್ರಿ.ಶ. 8ನೆಯ ಶತಮಾನದ ಉತ್ತರಾರ್ಧದಲ್ಲಿ ಆಗ್ನೇಯ ಏಷ್ಯದ ಚಂಪ ದ್ವೀಪದಲ್ಲಿ ಆಡಳಿತ ಮಾಡತೊಡಗಿದ ಪಾಂಡುರಂಗ ಸಂತತಿಯ ರಾಜನಾದ ಪೃಥ್ವೀಂದ್ರವರ್ಮನ ಅನಂತರ ಆಳಿದ ರಾಜ. ಪೃಥ್ವೀಂದ್ರವರ್ಮನ್‍ನ ಹಿರಿಯ ಮಗ. ಈತನ ಕಾಲದಲ್ಲಿ (ಕ್ರಿ.ಶ. 787) ಜಾವದ್ವೀಪದ ರಾಜ ಚಂಪ ರಾಜ್ಯಕ್ಕೆ ಮುತ್ತಿಗೆ ಹಾಕಿದ. ಯುದ್ಧಕಾಲದಲ್ಲಿ ಚಂಪದ ಹಲವು ಪವಿತ್ರ ದೇವಾಲಯಗಳು ನಾಶವಾದವು. ಇಂದ್ರವರ್ಮನ್ ಶತ್ರುಗಳನ್ನು ಹಿಮ್ಮೆಟ್ಟಿಸಿ ನಾಶವಾದ ದೇವಮಂದಿರಗಳನ್ನು ಜೀರ್ಣೋದ್ಧಾರ ಮಾಡಿಸಿ ಇಂದ್ರ ಭದ್ರೇಶ್ವರ, ಇಂದ್ರ ಭೋಗೇಶ್ವರ ಮತ್ತು ಇಂದ್ರ ಪರಮೇಶ್ವರ ಮೊದಲಾದ ವಿಗ್ರಹಗಳನ್ನು ಸ್ಥಾಪಿಸಿದನಲ್ಲದೆ ಚೀನ ಚಕ್ರಾಧಿಪತ್ಯದೊಡನೆ ಕಡಿದುಹೋಗಿದ್ದ ರಾಜಕೀಯ ಸಂಬಂಧವನ್ನು ಪುನಃ ಸ್ಥಾಪಿಸಿದ. ಕ್ರಿ.ಶ. ಸುಮಾರು 801ರಲ್ಲಿ ಮರಣ ಹೊಂದಿದ. 

ಇಂದ್ರವರ್ಮನ್ I (ಕಂಬುಜ): (877-889) : ಕ್ರಿ.ಶ. 877ರಲ್ಲಿ ಈಗಿನ ಇಂಡೋ-ಚೀನ ಎಂದು ಕರೆಸಿಕೊಳ್ಳುವ ಪ್ರದೇಶದ ಭಾಗವಾಗಿದ್ದು ಕಂಬುಜವೆಂಬುದಾಗಿ ಕರೆಯಲ್ಪಡುತ್ತಿದ್ದ ರಾಜಮನೆತನದ ಆದ್ಯ ಪ್ರವರ್ತಕ. ಈತನ ರಾಣಿಯಾದ ಇಂದ್ರಾದೇವಿ ಭಾರತೀಯ ಸಂಜಾತಳೆಂದು ತಿಳಿದುಬರುತ್ತದೆ. ಇವನು ಪರಾಕ್ರಮಿ ಮತ್ತು ಕಲಾಭಿಮಾನಿ. ಈತನ ಕಾಲದಲ್ಲಿ ಕಂಬುಜದಲ್ಲಿ ಅನೇಕ ಭವ್ಯ ಕಟ್ಟಡಗಳು ನಿರ್ಮಾಣವಾದವು. ಈತ ಇಂದ್ರ ತಟಾಕವೆಂಬ ದೊಡ್ಡ ಕೆರೆಯೊಂದನ್ನು ಕಟ್ಟಿಸಿದ. ಇಂದ್ರಯಾನ, ಇಂದ್ರವಿಮಾನಕ, ಇಂದ್ರಪ್ರಾಸಾದಕ ಎಂಬ ಭವ್ಯ ಅರಮನೆಗಳನ್ನೂ ಅನೇಕ ದೇವಾಲಯಗಳನ್ನೂ ಕಟ್ಟಿಸಿದ. ಇಂದ್ರವರ್ಮನ ಮರಣಾನಂತರ ಈತನ ಮಗನಾದ ಯಶೋವರ್ಮನ್ ಕಂಬುಜದ ರಾಜನಾದ. 

ಇಂದ್ರವರ್ಮನ್ II : (860-895). ಚಂಪದ ಪಾಂಡುರಂಗ ರಾಜಮನೆತನದ ಆಳ್ವಿಕೆ ಕ್ರಿ.ಶ. 860ರ ಸುಮಾರಿನಲ್ಲಿ ಕೊನೆಗೊಂಡಾಗ, ಅದರ ಸ್ಥಾನದಲ್ಲಿ ಉಪಕ್ರಮವಾದ ಭೃಗು ಸಂತತಿಯ ಸ್ಥಾಪಕ. ಈತ ತನ್ನ ಶ್ರದ್ಧೋತ್ಸಾಹ ಮತ್ತು ಕಾರ್ಯತತ್ಪರತೆಯ ಗುಣಗಳಿಂದ ತನ್ನ ರಾಜಸಂತತಿಯನ್ನು ಸ್ಥಾಪಿಸಲು ಶಕ್ತನಾದನೆಂದು ಶಾಸನಗಳಲ್ಲಿ ಬಣ್ಣಿಸಲಾಗಿದೆ. ಈತನ ಮೊದಲಿನ ಹೆಸರು ಶ್ರೀಲಕ್ಷ್ಮೀಂದ್ರಭೂಮೀಶ್ವರಗ್ರಾಮಸ್ವಾಮಿನ್ ಎಂಬುದಾಗಿತ್ತೆಂದೂ ರಾಜನಾದ ಮೇಲೆ ಶ್ರೀ ಜಯಇಂದ್ರವರ್ಮನ್ ಮಹಾರಾಜಾಧಿರಾಜ ಎಂದು ಇವನು ತನ್ನನ್ನು ಕರೆದುಕೊಂಡನೆಂದೂ ತಿಳಿದುಬರುತ್ತದೆ. ಇಂದ್ರವರ್ಮ ಶೈವ ಮತೀಯನಾದರೂ ಬೌದ್ಧಮತಕ್ಕೆ ವಿಶೇಷ ಪ್ರೋತ್ಸಾಹ ಕೊಟ್ಟ. ಅನೇಕ ಬೌದ್ಧಮತಗಳನ್ನು ಸ್ಥಾಪಿಸಿದ. ಕ್ರಿ.ಶ. 877ರಲ್ಲಿ ಚೀನಾ ದೇಶಕ್ಕೆ ರಾಜಕೀಯ ನಿಯೋಗವೊಂದನ್ನು ಕಳುಹಿಸಿದ್ದ. 

ಇಂದ್ರವರ್ಮನ್ III: (911-971). ಭದ್ರವರ್ಮನ್ ರಾಜನ ಮಗ ಮತ್ತು ಉತ್ತರಾಧಿಕಾರಿ. ಶ್ರೇಷ್ಠ ವಿದ್ವಾಂಸ. ತತ್ತ್ವಮೀಮಾಂಸೆ, ಬೌದ್ಧದರ್ಶನ, ಪಾಣಿನಿಯ ಅಷ್ಟಾಧ್ಯಾಯಿ ಹಾಗೂ ಶೈವ ಉತ್ತರಕಲ್ಪಸೂತ್ರಗಳಲ್ಲಿ ವಿಶೇಷ ಪರಿಣತೆ ಪಡೆದಿದ್ದ. ಈತನ ಕಾಲದಲ್ಲಿ ಕಂಬುಜ ದ್ವೀಪದ ರಾಜನಾದ ರಾಜೇಂದ್ರವರ್ಮನ್ ಚಂಪಕ್ಕೆ ಮುತ್ತಿಗೆ ಹಾಕಿದ. ಅನೇಕ ದೇವಾಲಯಗಳು ನಾಶವಾದುವು. ಆದರೂ ಇಂದ್ರವರ್ಮನ್ ಕಾಲಕ್ರಮದಲ್ಲಿ ಮುತ್ತಿಗೆಯಿಂದಾದ ಹಾನಿಯನ್ನು ಸರಿಪಡಿಸಲು ಶಕ್ತನಾದನಲ್ಲದೆ ಚೀನಾ ಚಕ್ರಾಧಿಪತ್ಯದೊಡನೆ ರಾಜತಾಂತ್ರಿಕ ಸಂಬಂಧವನ್ನೂ ಮುಂದುವರಿಸಿದ. ಕ್ರಿ.ಶ. 971ರಲ್ಲಿ ಮುಮ್ಮಡಿ ಇಂದ್ರವರ್ಮನ್ ಮರಣ ಹೊಂದಿದಾಗ ಪರಮೇಶ್ವರವರ್ಮ ರಾಜನಾದ. 
 
ಇಂದ್ರವರ್ಮನ್ IV : ಈತ ಇಮ್ಮಡಿ ಇಂದ್ರವರ್ಮನ ಮೊಮ್ಮಗ ಹಾಗೂ ಪರಮೇಶ್ವರವರ್ಮನ ಮಗ. ಅನ್ನಾಮ್ ಚಕ್ರವರ್ತಿ ಕಳುಹಿಸಿದ ರಾಜದೂತನನ್ನು ಪರಮೇಶ್ವರವರ್ಮನ್ ಅವಮಾನಗೊಳಿಸಿದ್ದರಿಂದ ಕುಪಿತನಾದ ಅನ್ನಾಮ್ ಚಕ್ರವರ್ತಿ ಚಂಪ ರಾಜ್ಯವನ್ನು ಮುತ್ತಿದ. ಆಗ ಪರಮೇಶ್ವರವರ್ಮನಿಗೆ ಮರಣ ಸಂಭವಿಸಿತು. ಚಂಪರಾಜ್ಯ ಅನ್ನಾಮ್ ಸಾಮ್ರಾಜ್ಯದ ವಶವಾಯಿತು. ನಾಲ್ವಡಿ ಇಂದ್ರವರ್ಮನ್ ತಲೆಮರೆಸಿಕೊಂಡು ಚಂಪ ಸಿಂಹಾಸನವನ್ನು ಪಡೆಯಲು ಚೀನಾದ ಚಕ್ರವರ್ತಿಯೊಡನೆ ವ್ಯವಹರಿಸಿದ. ಆದರೆ ಚೀನಾದಿಂದ ಯಾವ ಸಹಾಯವೂ ಸಿಕ್ಕಲಿಲ್ಲ. ಕೊನೆಗೆ ಚಂಪದಲ್ಲಿದ್ದ ಅನ್ನಾಮ್ ಅಧಿಕಾರಿಯನ್ನು ಸಂಚಿನಿಂದ ಕೊಲ್ಲಿಸಿ ಕ್ರಿ.ಶ. 985ರಲ್ಲಿ ಚಂಪದ ರಾಜನಾದ. ಆಮೇಲೆ ಇವನ ಆಡಳಿತ ಬಹುಕಾಲ ಮುಂದುವರಿಯಲಿಲ್ಲ. 			
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ